top of page

ಬಿಹಾರದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಹತ್ಯೆ: ಕಾನೂನು-ಸುವ್ಯವಸ್ಥೆ ಕುರಿತು ನಿತೀಶ್ ಸರ್ಕಾರ ವಿರುದ್ಧ ವಿರೋಧ ಪಕ್ಷಗಳ ತರಾಟೆ

Writer: new waves technologynew waves technology

ಸಂತೋಷ್ ಕುಮಾರ ಅವರು ಎರಡು ಕಡೆಯವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು, ಆದರೆ ಹಲ್ಲೆಯಲ್ಲಿ ಅವರ ತಲೆಗೆ ಗಂಭೀರ ಗಾಯಗಳಾಗಿ ಪ್ರಜ್ಞಾಹೀನರಾದರು. ಅವರ ಸಹೋದ್ಯೋಗಿಗಳು ಅವರನ್ನು ಮುಂಗೇರ್‌ನ ಸದರ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾಗೆ ಕರೆದೊಯ್ಯಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟರು.



ಪಾಟ್ನಾ: ಕಳೆದ 48 ಗಂಟೆಗಳಲ್ಲಿ ಬಿಹಾರದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ಉದ್ರಿಕ್ತ ಗುಂಪೊಂದು ಕೊಂದು ಹಾಕಿದ್ದು, ರಾಜ್ಯ ಗೃಹ ಇಲಾಖೆ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ನಿನ್ನೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಮುಂಗೇರ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಐಟಿಸಿ ನಂದಲಾಲ್‌ಪುರ ಗ್ರಾಮದ ಬಳಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆಯಿತು. ಸಹಾಯಕ ಸಬ್-ಇನ್ಸ್‌ಪೆಕ್ಟರ್ (ASI) ಸಂತೋಷ್ ಕುಮಾರ್ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ಸಂತೋಷ್ ಕುಮಾರ ಅವರು ಎರಡು ಕಡೆಯವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು, ಆದರೆ ಹಲ್ಲೆಯಲ್ಲಿ ಅವರ ತಲೆಗೆ ಗಂಭೀರ ಗಾಯಗಳಾಗಿ ಪ್ರಜ್ಞಾಹೀನರಾದರು. ಅವರ ಸಹೋದ್ಯೋಗಿಗಳು ಅವರನ್ನು ಮುಂಗೇರ್‌ನ ಸದರ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾಗೆ ಕರೆದೊಯ್ಯಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟರು.ಮುಂಗೇರ್‌ ಸದರ್‌ನ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (SDPO) ಅಭಿಷೇಕ್ ಆನಂದ್ ಘಟನೆ ಬಗ್ಗೆ ವಿವರಿಸುತ್ತಾ, ಎಎಸ್ ಐ ಸಂತೋಷ್ ಕುಮಾರ್ ಅವರ ತಲೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಯಿತು, ಇದರಿಂದಾಗಿ ಅವರಿಗೆ ತೀವ್ರ ಗಾಯಗಳಾಗಿವೆ. ಅವರನ್ನು ಮುಂಗೇರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಉತ್ತಮ ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (PMCH) ಕರೆದೊಯ್ಯಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದರು.

ಹತ್ಯೆಗೀಡಾದ ಎಎಸ್‌ಐ ಕೈಮೂರ್ ಜಿಲ್ಲೆಯ ಭಬುವಾ ನಿವಾಸಿಯಾಗಿದ್ದು, ಸುಮಾರು ಒಂದು ವರ್ಷದ ಹಿಂದೆ ಮುಂಗೇರ್‌ಗೆ ವರ್ಗಾವಣೆಗೊಂಡಿದ್ದರು. ಅವರ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಅವರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.ಕಳೆದ ಎರಡು ದಿನಗಳಲ್ಲಿ ಬಿಹಾರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಎರಡನೇ ಹತ್ಯೆ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು, ಅರಾರಿಯಾ ಜಿಲ್ಲೆಯ ಫುಲ್ಕಹಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಎಸ್‌ಐ ರಾಜೀವ್ ರಂಜನ್ ಅವರನ್ನು ಗುಂಪೊಂದು ತಳ್ಳಿ ಹಲ್ಲೆ ಮಾಡಿ ಹತ್ಯೆ ಮಾಡಿತ್ತು. ನಿಷೇಧಾಜ್ಞೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿರುವ ಆರೋಪಿ ಅನ್ಮೋಲ್ ಯಾದವ್ ಅವರನ್ನು ಬಂಧಿಸಲು ರಂಜನ್ ಹೋಗಿದ್ದರು.

ಈ ವೇಳೆ ಅನ್ಮೋಲ್ ಯಾದವ್ ಅವರ ಸಹಚರರು ಅಧಿಕಾರಿಯ ಮೇಲೆ ದಾಳಿ ಮಾಡಿದ್ದಲ್ಲದೆ, ಆರೋಪಿಗಳನ್ನು ಪೊಲೀಸ್ ಕಸ್ಟಡಿಯಿಂದ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 2007 ರಲ್ಲಿ ಪೊಲೀಸ್ ಪಡೆಗೆ ಸೇರಿದ ರಂಜನ್ ಮೇಲೆ ತೀವ್ರವಾದ ಹಲ್ಲೆ ನಡೆದು ಅವರು ಮೃತಪಟ್ಟಿದ್ದಾರೆ.

ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆಗಳು ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿವೆ. ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್, ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡು, ರಾಜ್ಯದಲ್ಲಿ ಅಪರಾಧವನ್ನು ನಿಯಂತ್ರಿಸುವಲ್ಲಿ ಸರ್ಕಾರದ ಗೃಹ ಇಲಾಖೆ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.

Comentários


bottom of page