ಬಂಧಿತರ ಪೈಕಿ ನಾಲ್ವರು ಶಿವಮೊಗ್ಗ ಹಾಗೂ ಮೂವರು ಆನೆಪಾಳ್ಯ, ಬೈಯಪ್ಪನಹಳ್ಳಿಯ ನಿವಾಸಿಗಳು. ಬಂಧಿತರ ಪೈಕಿ ಮೂವರು ರೌಡಿಶೀಟರ್‌ಗಳು ಆಗಿದ್ದಾರೆ.

ಬೆಂಗಳೂರು: ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗರುಡಾ ಮಾಲ್ ಬಳಿ ರೌಡಿಶೀಟರ್ ಹೈದರ್ ಅಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ. ಕೊಲೆಗೆ ಹಳೆಯ ದ್ವೇಷವೇ ಕಾರಣ ಎಂದು ಹೇಳಲಾಗುತ್ತಿದೆ.
ಬಂಧಿತರ ಪೈಕಿ ನಾಲ್ವರು ಶಿವಮೊಗ್ಗ ಹಾಗೂ ಮೂವರು ಆನೆಪಾಳ್ಯ, ಬೈಯಪ್ಪನಹಳ್ಳಿಯ ನಿವಾಸಿಗಳು. ಬಂಧಿತರ ಪೈಕಿ ಮೂವರು ರೌಡಿಶೀಟರ್‌ಗಳು ಆಗಿದ್ದಾರೆ. ನಯಾಜ್ ಪಾಷಾ, ನಾಜುದ್ದೀನ್, ರಿಜ್ವಾನ್, ಮತೀನ್, ಸದ್ದಾಂ, ದರ್ಶನ್ ಅಲಿಯಾಸ್ ಶಿವದರ್ಶನ್, ರಾಹಿದ್, ವಸೀಂ ಬಂಧಿತ ಆರೋಪಿಗಳು. ನಯಾಜ್ ಪಾಷಾ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ.
ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಕರಣದ ಪ್ರಮುಖ ಆರೋಪಿ ಪಾಷಾ ತನ್ನ ಗ್ಯಾಂಗ್‌ನೊಂದಿಗೆ ಅಲಿಯನ್ನು ಕೊಲ್ಲಲು ಸಂಚು ರೂಪಿಸಿದ್ದ. ಪಾಷಾ ಮತ್ತು ಅಲಿ ನಡುವೆ ದೀರ್ಘಕಾಲದ ದ್ವೇಷವಿತ್ತು, ಇಬ್ಬರೂ ವರ್ಷಗಳಿಂದ ಪರಸ್ಪರ ಕೊಲ್ಲಲು ಹಲವು ಬಾರಿ ಪ್ರಯತ್ನಿಸಿದ್ದರು. ಈ ಹಿಂದೆ ಎದುರಾಳಿ ಗ್ಯಾಂಗ್‌ಗಳಿಂದ ಇಬ್ಬರ ಮೇಲೂ ಎರಡು ಬಾರಿ ದಾಳಿ ನಡೆದಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಜಿಮ್ ಮಾಲೀಕನೂ ಆಗಿರುವ ಸ್ನೇಹಿತನ ಜತೆಗೆ ಶುಕ್ರವಾರ ಮಧ್ಯರಾತ್ರಿವರೆಗೂ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್‌ವೊಂದರಲ್ಲಿ ಹೈದರ್ ಅಲಿ ಪಾರ್ಟಿ ನಡೆಸಿದ್ದ. ಹೊರಗೆ ಬರುವುದನ್ನೇ ಆರೋಪಿಗಳು ಕಾದಿದ್ದರು. ಹೊರಗೆ ಬರುತ್ತಿದ್ದಂತೆಯೇ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಫುಟ್‌ಬಾಲ್ ಮೈದಾನ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ, ಕೊಲೆ ಮಾಡಿ ಪರಾರಿ ಆಗಿದ್ದರು. ಅದೇ ವೇಳೆ ಕಾರಿನಲ್ಲಿ ಬಂದಿದ್ದ ಇನ್ನೂ ಕೆಲವು ಆರೋಪಿಗಳು ಮೈದಾನ ಬಳಿ ಕಾದಿದ್ದರು. , ಪ್ರಕರಣದ ತನಿಖೆಗಾಗಿ ಕಬ್ಬನ್ ಪಾರ್ಕ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಅಡಿಯಲ್ಲಿ ವಿಶೇಷ ತಂಡವನ್ನು ರಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Comments