top of page

ಅಮಿತ್ ಶಾ ಹೇಳಿಕೆ: ವಿಧಾನ ಮಂಡಲದ ಉಭಯ ಸದನಗಳಲ್ಲೂ ಗದ್ದಲ-ಕೋಲಾಹಲ; ಅಂಬೇಡ್ಕರ್ ಭಾವಚಿತ್ರ ಹಿಡಿದು ಘೋಷಣೆ!

  • Writer: new waves technology
    new waves technology
  • Dec 19, 2024
  • 2 min read

ಸದನದಲ್ಲಿ 'ಜೈ ಭೀಮ್', 'ನಮಗೆ ನ್ಯಾಯ ಬೇಕು' ಮತ್ತು 'ಅಮಿತ್ ಶಾ ಅವರನ್ನು ಸಂಪುಟದಿಂದ ಕೈಬಿಡಿ' ಎಂಬ ಘೋಷಣೆಗಳು ಮೊಳಗಿದವು, ಸದನದಲ್ಲಿ ಗದ್ದಲ ಹೆಚ್ಚಾದಾಗ ಸ್ಪೀಕರ್ ಯು ಟಿ ಖಾದರ್ ಸದನವನ್ನು ಅಲ್ಪಾವಧಿಗೆ ಮುಂದೂಡಿದರು.

ಬೆಳಗಾವಿ: ಸಂಸತ್ತಿನಲ್ಲಿ ಡಾ.ಭೀಮರಾವ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಸಭೆಯಲ್ಲಿ ಗುರುವಾರ ಕೋಲಾಹಲ ಉಂಟಾಯಿತು.

ಬಳ್ಳಾರಿ ಮತ್ತು ರಾಜ್ಯದ ಇತರೆಡೆ ಬಾಣಂತಿಯರ ಸಾವಿನ ಕುರಿತ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡುತ್ತಿದ್ದಾಗ, ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಅಡ್ಡಿಪಡಿಸಿ ನಿರ್ಣಯ ಮಂಡಿಸಲು ಬಯಸುವುದಾಗಿ ಹೇಳಿದರು. ಹಲವಾರು ಕಾಂಗ್ರೆಸ್ ಶಾಸಕರು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಿಡಿದುಕೊಂಡು ಎದ್ದುನಿಂತು ಘೋಷಣೆಗಳನ್ನು ಕೂಗಲಾರಂಭಿಸಿದರು. ಸದನದಲ್ಲಿ 'ಜೈ ಭೀಮ್', 'ನಮಗೆ ನ್ಯಾಯ ಬೇಕು' ಮತ್ತು 'ಅಮಿತ್ ಶಾ ಅವರನ್ನು ಸಂಪುಟದಿಂದ ಕೈಬಿಡಿ' ಎಂಬ ಘೋಷಣೆಗಳು ಮೊಳಗಿದವು, ಸದನದಲ್ಲಿ ಗದ್ದಲ ಹೆಚ್ಚಾದಾಗ ಸ್ಪೀಕರ್ ಯು ಟಿ ಖಾದರ್ ಅವರು ಸದನವನ್ನು ಅಲ್ಪಾವಧಿಗೆ ಮುಂದೂಡಿದರು.

ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯ ವೇಳೆ ಅಮಿತ್ ಶಾ ಅವರು, ‘ಅಭಿ ಏಕ್ ಫ್ಯಾಷನ್ ಹೋ ಗಯಾ ಹೈ - ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ನಾಮಸ್ಮರಣೆ ಮಾಡಿದ್ದರೆ ಅವರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು. ಅಂಬೇಡ್ಕರ್ ಅವರ ಹೆಸರನ್ನು ಕಾಂಗ್ರೆಸ್ ತೆಗೆದುಕೊಳ್ಳುತ್ತಿರುವುದಕ್ಕೆ ಬಿಜೆಪಿಗೆ ಸಂತೋಷವಾಗಿದೆ, ಆದರೆ ಪಕ್ಷವು ಅವರ ಬಗ್ಗೆ ನಿಜವಾದ ಭಾವನೆಗಳ ಬಗ್ಗೆ ಮಾತನಾಡಬೇಕು ಎಂದು ಅಮಿತ್ ಶಾ ಹೇಳಿದರು. ಅಂಬೇಡ್ಕರ್ ಅವರು 370 ನೇ ವಿಧಿ ಸೇರಿದಂತೆ ಆಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ನೀತಿಗಳೊಂದಿಗೆ ತಮ್ಮ ಭಿನ್ನಾಭಿಪ್ರಾಯವನ್ನು ಉಲ್ಲೇಖಿಸಿ ಮೊದಲ ಕ್ಯಾಬಿನೆಟ್‌ನಿಂದ ಹೇಗೆ ರಾಜೀನಾಮೆ ನೀಡಬೇಕಾಯಿತು ಎಂಬುದರ ಬಗ್ಗೆ ಅಮಿತ್ ಶಾ ವಿವರಿಸಿದರು.


ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಗೆ ವಿಧಾನ ಪರಿಷತ್ತಿನಲ್ಲಿ ಕೋಲಾಹಲ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿ ಆರ್ ಅಂಬೇಡ್ಕರ್ ಅವರ ವಿರುದ್ಧ ನೀಡಿರುವ ಹೇಳಿಕೆಗಳು ಗುರುವಾರ ವಿಧಾನ ಪರಿಷತ್ತಿನಲ್ಲಿ ಕೋಲಾಹಲವನ್ನು ಸೃಷ್ಟಿಸಿತು, ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಎಂಎಲ್‌ಸಿಗಳು ಭಾರತೀಯ ಸಂವಿಧಾನದ ಶಿಲ್ಪಿಗೆ "ಅವಮಾನ" ಮಾಡಿದ್ದಾರೆ ಎಂದು ಪರಸ್ಪರ ಆರೋಪಿಸಿದರು. ಆರಂಭದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ್ದ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವರು ಸಮರ್ಥಿಸಿಕೊಳ್ಳಲು ಸದನದಲ್ಲಿ ಇಲ್ಲವಾದ್ದರಿಂದ ಚರ್ಚೆಗೆ ಅವಕಾಶ ನೀಡಲಾಗದು ಎಂದರು.

ಕಾಂಗ್ರೆಸ್‌ನ ಎಂಎಲ್‌ಸಿ ಬಿ ಕೆ ಹರಿಪ್ರಸಾದ್‌ ಅವರು ಅಂಬೇಡ್ಕರ್‌ ಭಾವಚಿತ್ರ ಹಿಡಿದು ವಿಷಯ ಪ್ರಸ್ತಾಪಿಸಲು ಯತ್ನಿಸಿದಾಗ ಸಭಾಪತಿ ಹೊರಟ್ಟಿ ಅವರು, ಪ್ರಶ್ನೋತ್ತರ ಅವಧಿಯ ನಂತರ ಚರ್ಚೆ ನಡೆಸೋಣ ಎಂದರು. ಸಂವಿಧಾನ ರಚಿಸಿದ ವ್ಯಕ್ತಿಗೆ ಅಪಮಾನ ಮಾಡಲಾಗಿದೆ, ಹೀಗಾಗಿ ಪ್ರಶ್ನೋತ್ತರ ಅವಧಿಗೂ ಮುನ್ನ ಚರ್ಚೆ ನಡೆಸಿದರೆ ಒಳಿತು ಎಂದು ಹರಿಪ್ರಸಾದ್ ಪಟ್ಟು ಹಿಡಿದರು. ಅಂಬೇಡ್ಕರ್ ಬದುಕಿದ್ದಾಗ ಯಾರು ಎಷ್ಟು ಅವಮಾನ ಮಾಡಿದ್ದಾರೆ, ಸತ್ತಾಗ ಯಾರು ಎಷ್ಟು ಅವಮಾನ ಮಾಡಿದ್ದಾರೆ ಎಂಬುದನ್ನು ಚರ್ಚಿಸೋಣ ಎಂದು ಬಿಜೆಪಿ ಎಂಎಲ್ ಸಿ ಸಿ ಟಿ ರವಿ ತಿರುಗೇಟು ನೀಡಿದರು.


ಈ ವೇಳೆ ಸಚಿವರಾದ ಬೋಸರಾಜು, ಜಿ.ಪರಮೇಶ್ವರ ನೇತೃತ್ವದ ಕಾಂಗ್ರೆಸ್ ಎಂಎಲ್‌ಸಿಗಳು ಹಳೆ ಕಥೆ ಬಿಡಿ, ಈಗ ಏನಾಗಿದೆ ಎಂದು ಚರ್ಚಿಸಿ ಎಂದರು. ಇದಕ್ಕೆ ತಿರುಗೇಟು ನೀಡಿದ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾ ಅವರು ಅಂಬೇಡ್ಕರ್ ಅವರನ್ನು ಅವಮಾನಿಸಿಲ್ಲ, ಬದಲಿಗೆ ಕಾಂಗ್ರೆಸ್ ಹೇಗೆ ಅವಮಾನ ಮಾಡಿದೆ ಎಂದು ಹೇಳಿದ್ದಾರೆ. ಕೆಲ ಕಾಂಗ್ರೆಸ್ ಸದಸ್ಯರು ಡೌನ್ ಡೌನ್ ಬಿಜೆಪಿ, ಅಮಿತ್ ಶಾ ಡೌನ್ ಡೌನ್ ಎಂಬ ಘೋಷಣೆಗಳನ್ನು ಕೂಗಿದರು. ಸದವನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ ಸಭಾಪತಿ ಹೊರಟ್ಟಿ ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರು. ಷಾ ಅವರು ಸಂಸತ್ತಿನಲ್ಲಿ ಮಾಡಿದ ಸಂಪೂರ್ಣ ಭಾಷಣವನ್ನು ಪ್ರಸಾರ ಮಾಡುವಂತೆ ರವಿ ಸಭಾಪತಿಗೆ ಮನವಿ ಮಾಡಿದರು, ಇದು ಕಾಂಗ್ರೆಸ್‌ನ "ನಾಟಕ" ವನ್ನು ಹೊರತರುತ್ತದೆ ಮತ್ತು ಯಾವುದೇ ಚರ್ಚೆಯ ಅಗತ್ಯವಿಲ್ಲ ಎಂದರು. ಪ್ರಶ್ನೋತ್ತರ ಅವಧಿಯ ನಂತರ, ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಮತ್ತೊಮ್ಮೆ ವಿಷಯ ಪ್ರಸ್ತಾಪಿಸಿದರು, ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದಿದ್ದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಭಿತ್ತಿಪತ್ರಗಳನ್ನು ಹಿಡಿದು ನಿಂತಿದ್ದು, ಎರಡೂ ಕಡೆಯವರ ನಡುವೆ ವಾಗ್ವಾದ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು. ಎರಡೂ ಕಡೆಯವರನ್ನು ಸಮಾಧಾನಪಡಿಸಿ ಕಲಾಪ ಮುಂದುವರಿಸುವ ಪ್ರಯತ್ನ ವಿಫಲವಾದ ಕಾರಣ ಸಭಾಪತಿ ಹೊರಟ್ಟಿ ಸದನವನ್ನು ಕೆಲಕಾಲ ಮುಂದೂಡಿದರು. ಸದನ ಪುನರಾರಂಭವಾದಾಗ, ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಗೊಂದಲದ ದೃಶ್ಯಗಳು ಮುಂದುವರಿದಿದ್ದರಿಂದ ಯಾವುದೇ ಚರ್ಚೆಯಿಲ್ಲದೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಸೂದೆಯನ್ನು ಗದ್ದಲದ ನಡುವೆ ಅಂಗೀಕರಿಸಲಾಯಿತು.

コメント


bottom of page