top of page

ಗ್ಯಾರಂಟಿ ಮೂಲಕ ಜನರ ಹಾದಿ ತಪ್ಪಿಸಲಾಗಿದ್ದು, ಯೋಜನೆಗಳು ಹೊರೆಯಾಗಿ ಮಾರ್ಪಟ್ಟಿವೆ: 2ನೇ ಹಂತದ ಜನಾಕ್ರೋಶ ಯಾತ್ರೆಯಲ್ಲಿ ಕಾಂಗ್ರೆಸ್ ವಿರುದ್ಧ BJP ವಾಗ್ದಾಳಿ

  • Writer: new waves technology
    new waves technology
  • Apr 17
  • 2 min read

ಬೆಳಗಾವಿಯಲ್ಲಿ ನಡೆದ ಎರಡನೇ ಹಂತದ ಜನಕ್ರೋಶ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಹಾದಿ ತಪ್ಪಿಸುತ್ತಿದ್ದು, ಇದೀಗ ಇದೇ ಯೋಜನೆಗಳು ಹೊರೆಯಾಗಿ ಮಾರ್ಪಟ್ಟಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬುಧವಾರ ವಾಗ್ದಾಳಿ ನಡೆಸಿತು.

ಬೆಳಗಾವಿಯಲ್ಲಿ ನಡೆದ ಎರಡನೇ ಹಂತದ ಜನಕ್ರೋಶ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದಲ್ಲಿ ಯಾವುದೇ ಉದ್ಯಮಿ ಮಾಡದಷ್ಟು ದೊಡ್ಡ ಸಾಧನೆಯನ್ನು ಕಾಂಗ್ರೆಸ್‌ ನಾಯಕರು ಮಾಡಿದ್ದಾರೆ. ಯಂಗ್ ಇಂಡಿಯಾ ಟ್ರಸ್ಟ್ ಮೂಲಕ ದೊಡ್ಡ ಹಗರಣ ನಡೆಸಿರುವುದು ಬೆಳಕಿಗೆ ಬಂದಿದೆ. ದೊಡ್ಡ ಹಗರಣ ಮಾಡುವುದೇ ಕಾಂಗ್ರೆಸ್‌ನ ಅಭಿವೃದ್ಧಿ ಮಾದರಿಯಾಗಿದೆ ಎಂದು ವ್ಯಂಗ್ಯವಾಡಿದರು.

ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ, ಮುಸ್ಲಿಂ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗಕ್ಕೆ ವರ್ಷಕ್ಕೆ 30 ಲಕ್ಷ ರೂ ನೆರವು ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನಿಲುವು ಹೊಂದಿದೆ. ಹಿಂದುಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಹಿಂದುಗಳು ತಕ್ಕ ಉತ್ತರ ನೀಡುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ, 50ಕ್ಕೂ ಅಧಿಕ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಜನ ಅನುಭವಿಸುತ್ತಿರುವ ತೊಂದರೆ ಬೆಳಕಿಗೆ ತರಲು ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಪೆಟ್ರೋಲ್ ಮತ್ತು ಹಾಲಿನಿಂತಹ ಅಗತ್ಯ ವಸ್ತುಗಳ ಬೆಲೆಯೆಲ್ಲಿ ಬಿಜೆಪಿ ಕೈವಾಡ ಎಂಬ ಆರೋಪವನ್ನು ನಿರಾಕರಿಸಿದರು.

ಜಾತಿ ಗಣತಿ ಮಾಡದೇ ಸಿಎಂ ಸಿದ್ದರಾಮಯ್ಯ 165 ಕೋಟಿ ರೂ. ಗುಳುಂ ಮಾಡಿದ್ದಾರೆ. ಸಿದ್ದರಾಮಯ್ಯ ಧರ್ಮ, ಜಾತಿ ಒಡೆಯುವುದರಲ್ಲಿ ನಂಬರ್1 ಆಗಿದ್ದಾರೆ. ಈ ಹಿಂದೆ ಲಿಂಗಾಯತ ಧರ್ಮ ಒಡೆಯಲು ಹೋಗಿ ಕಪಾಳ ಮೋಕ್ಷ ತಿಂದಿದ್ದಾರೆ. ಈಗ ಜಾತಿ ಗಣತಿ ವರದಿ ತೋರಿಸಿ ಹಿಂದೂಗಳನ್ನು ಒಡೆಯುತ್ತಿದ್ದಾರೆ. ಮುಸ್ಲಿಂ ಧರ್ಮದಲ್ಲೂ 10 ಜಾತಿಗಳಿವೆ. ಒಂದೂ ಡಿವೈಡ್ ಮಾಡಿಲ್ಲ. ಆದರೆ ಹಿಂದುಗಳನ್ನು ಪೀಸ್ ಪೀಸ್ ಮಾಡಿದ್ದಾರೆ. ಜಾತಿ ಜನಗಣತಿಯಲ್ಲಿ ಮುಸ್ಲಿಮರನ್ನು ಅಗ್ರಸ್ಥಾನದಲ್ಲಿ ಇರಿಸುವ ಮೂಲಕ ಕರ್ನಾಟಕವನ್ನು "ಮಿನಿ ಪಾಕಿಸ್ತಾನ"ವನ್ನಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದರು.

ಸಮೀಕ್ಷೆಗೆ ಮನೆ ಮನೆಗೆ ಬಂದಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಮನೆ ಮನೆಗೆ ಹೋಗದೇ ಸರ್ವೆ ಸಿದ್ದರಾಮಯ್ಯನವರ ಟೆಕ್ನಿಕ್. ಸಮೀಕ್ಷೆ ಮಾಡದೇ ಅದಕ್ಕೆ ಮೀಸಲಿಟ್ಟ 165 ಕೋಟಿ ರೂ. ಲೂಟಿ ಮಾಡಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಫೆವಿಕಲ್ ಹಚ್ಚಿಕೊಂಡಂತೆ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಫೆವಿಕಲ್ ಮುಖ್ಯಮಂತ್ರಿ, ದೇವೇಗೌಡರು ಸಿದ್ದರಾಮಯ್ಯರನ್ನು ಮಂತ್ರಿ ಮಾಡಿದರು. ಉಪಮುಖ್ಯಮಂತ್ರಿ, ಹಣಕಾಸು ಮಂತ್ರಿ ಮಾಡಿದರು. ಅಧಿಕಾರ ಇರುವ ತನಕ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದರು. ಅಧಿಕಾರ ಕೊಡಲ್ಲ ಎಂದಾಗ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಸಿಎಂ ಆದರು. ಸಿಎಂ ಬದಲಾವಣೆ ಒಪ್ಪಂದ ಆಗಿರುವುದು ನೂರಕ್ಕೆ ನೂರು ಸತ್ಯ. ಆಗ ಒಪ್ಪಿ ಸಿದ್ದರಾಮಯ್ಯ ಈಗ ಮಾತು ತಪ್ಪುತ್ತಿದ್ದಾರೆ ಎಂದು ಹೇಳಿದರು.

ಸಂಸದ ಜಗದೀಶ್ ಶೆಟ್ಟರ್ ಅವರು ಮಾತನಾಡಿ, 2028 ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 35 ಸ್ಥಾನಗಳಿಗೆ ಸೀಮಿತವಾಗಲಿದೆ. ಸಿದ್ದರಾಮಯ್ಯ ಆಡಳಿತಾತ್ಮಕ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಭ್ರಷ್ಟಾಚಾರದಲ್ಲಿ ಕರ್ನಾಟಕ ಈಗ ದೇಶದಲ್ಲಿಯೇ ನಂ.1 ಸ್ಥಾನದಲ್ಲಿದೆ. ನೈರ್ಮಲ್ಯ ಕಾರ್ಮಿಕರ ನೇಮಕಾತಿಗಾಗಿ 3–4 ಲಕ್ಷ ರೂ.ಗಳ ಲಂಚವನ್ನು ಕೇಳಲಾಗುತ್ತಿದೆ ಎಂದು ಆರೋಪಿಸಿದರು.

ಜನಾಕ್ರೋಶ ಯಾತ್ರೆಗೆ ರಮೇಶ ಜಾರಕಿಹೊಳಿ ಗೈರು

ಬೆಳಗಾವಿಯಲ್ಲಿ ನಡೆದ ಎರಡನೇ ಹಂತದ ಬಿಜೆಪಿ ಜನಾಕ್ರೋಶ ಯಾತ್ರೆಗೆ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಗೈರಾಗಿದ್ದು ಎದ್ದು ಕಾಣುತ್ತಿತ್ತು.

ಈ ವೇಳೆ ಯಾತ್ರೆ ಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಮೇಶ್ ಜಾರಕಿಹೊಳಿ ಅವರನ್ನು ಮೊಬೈಲ್ ಮೂಲಕ ಕರೆ ಮಾಡಿ, ಸಂಪರ್ಕಿಸಲು ಯತ್ನಿಸಿದರು. ಆದರೆ, ರಮೇಶ ಜಾರಕಿಹೊಳಿ ಅವರು ಕರೆ ಸ್ವೀಕರಿಸಲಿಲ್ಲ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿದ್ದರೂ ರಮೇಶ ಜಾರಕಿಹೊಳಿ ಜನಾಕ್ರೋಶ ಯಾತ್ರೆಯಿಂದ ದೂರ ಉಳಿದಿದ್ದರು ಎಂದು ತಿಳಿದುಬಂದಿದೆ.

Comments


bottom of page