top of page

ನವದೆಹಲಿ: ಯಮುನಾ ನದಿಯಿಂದ 1,300 ಟನ್ ತ್ಯಾಜ್ಯ ಹೊರಕ್ಕೆ- ಪರ್ವೇಶ್ ವರ್ಮಾ

Writer: new waves technologynew waves technology

ಇತ್ತೀಚಿಗೆ ಮುಗಿದ ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಮುನಾ ನದಿ ಶುದ್ದೀಕರಣವೂ ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.


ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಯಮುನಾ ನದಿ ಶುದ್ದೀಕರಣಕ್ಕೆ ಆದ್ಯತೆ ನೀಡಿದೆ. ಕಳೆದ 10 ದಿನಗಳಲ್ಲಿ ನದಿಯಿಂದ 1,300 ಟನ್ ತ್ಯಾಜ್ಯವನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ದೆಹಲಿಯ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಸಚಿವ ಪರ್ವೇಶ್ ವರ್ಮಾ ಬುಧವಾರ ತಿಳಿಸಿದರು.

ಇಂದು ದೋಣಿ ಮೂಲಕ ನದಿಯನ್ನು ಪರಿಶೀಲಿಸಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ದೆಹಲಿಯ ಎಲ್ಲಾ ಒಳ ಚರಂಡಿಗಳನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ (STP) ಸಂಪರ್ಕಿಸಲಾಗುವುದು ಮತ್ತು ಸಂಸ್ಕರಿಸದ ತ್ಯಾಜ್ಯ ನೀರು ನದಿಗೆ ಹರಿಯುವುದನ್ನು ತಡೆಯಲು ಅವುಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.

ಇತ್ತೀಚಿಗೆ ಮುಗಿದ ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಮುನಾ ನದಿ ಶುದ್ದೀಕರಣವೂ ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ. ಒಳಚರಂಡಿ ಸಂಸ್ಕರಣೆಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲಾಗುವುದು ಮತ್ತು ಎರಡು ವರ್ಷಗಳಲ್ಲಿ ಎಲ್ಲಾ ಎಸ್‌ಟಿಪಿಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ ಎಂದು ಅವರು ಜನರಿಗೆ ಭರವಸೆ ನೀಡಿದರು.

ಯಮುನಾ ನದಿಯನ್ನು ಸಂಪೂರ್ಣವಾಗಿ ಶುದ್ದೀಕರಿಸುವುದು ನಮ್ಮ ಆದ್ಯತೆಯಾಗಿದೆ. ಸದ್ಯಕ್ಕೆ ಕಳೆದ 10 ದಿನಗಳಲ್ಲಿ 1,300 ಮೆಟ್ರಿಕ್ ಟನ್ ಕಸವನ್ನು ತೆಗೆದುಹಾಕಲಾಗಿದೆ. ನದಿಯ ಮುಂಭಾಗವನ್ನು ಅಭಿವೃದ್ಧಿಪಡಿಸಲು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದೇವೆ. ಇದು ನದಿಯ ದಂಡೆಯನ್ನು ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಮಾಡಲಿದೆ ಎಂದು ತಿಳಿಸಿದರು.

ಕಳೆದೊಂದು ದಶಕದಲ್ಲಿ ನದಿಯನ್ನು ಸ್ವಚ್ಛಗೊಳಿಸಲು ಯಾವುದೇ ಮಹತ್ವದ ಕೆಲಸ ಆಗಿಲ್ಲ ಎಂದು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಈಗ, ದೆಹಲಿ ಸರ್ಕಾರ ಮಾತ್ರವಲ್ಲದೆ PMO ಕೂಡಾ ತೊಡಗಿಸಿಕೊಂಡಿದೆ ಎಂದು ವರ್ಮಾ ಹೇಳಿದರು.

Comments


bottom of page