top of page

ಬೆಂಗಳೂರು ಬಿಜೆಪಿ ಶಾಸಕರು, ಸಂಸದರಿಂದ ಸಿಎಂ ಭೇಟಿ; ಬಜೆಟ್‌ನಲ್ಲಿ ನಗರಕ್ಕೆ ಹೆಚ್ಚಿನ ಹಣ ಹಂಚಿಕೆಗೆ ಮನವಿ

Writer: new waves technologynew waves technology

ನೀವು ಮೆಟ್ರೋಗೆ ಮತ್ತೊಂದು ಪತ್ರ ಬರೆಯಿರಿ. ನಾವು ಮೂರೂ ಜನ ಸಂಸದರು ಸೇರಿಕೊಂಡು ಮೂರು ದಿನಗಳಲ್ಲಿ ಮೆಟ್ರೋ ಪ್ರಯಾಣ ದರ ಇಳಿಕೆ ಮಾಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯಗೆ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಬೆಂಗಳೂರು: ಬೆಂಗಳೂರಿನ ಬಿಜೆಪಿ ಶಾಸಕರು ಮತ್ತು ಸಂಸದರ ನಿಯೋಗ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮುಂಬರುವ ರಾಜ್ಯ ಬಜೆಟ್‌ನಲ್ಲಿ ನಗರದ ಅಭಿವೃದ್ಧಿಗೆ ಹೆಚ್ಚಿನ ಹಣ ಹಂಚಿಕೆ ಮಾಡುವಂತೆ ಮನವಿ ಮಾಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದ ಬಿಜೆಪಿ ನಿಯೋಗವು ನಗರದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 150 ಕೋಟಿ ರೂ. ಅನುದಾನ ನೀಡುವಂತೆ ಆಗ್ರಹಿಸಿತು.

ಮೆಟ್ರೋ ದರ ಹೆಚ್ಚಳ, ಮೊದಲ ಬಾರಿಗೆ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹಣ ಹಂಚಿಕೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ಆದಷ್ಟು ಬೇಗ ನಡೆಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಿಎಂ ಜೊತೆ ಚರ್ಚಿಸಲಾಯಿತು.


ಹಣಕಾಸು ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯ ಅವರು ಮಾರ್ಚ್ 7 ರಂದು 2025-26 ರ ಬಜೆಟ್ ಅನ್ನು ಮಂಡಿಸಲಿದ್ದಾರೆ, ಇದು ಅವರ 16ನೇ ಬಜೆಟ್ ಆಗಿದೆ.

"ನಮ್ಮ ಬೆಂಗಳೂರಿನ ಎಲ್ಲಾ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಶಾಸಕರಿಗೆ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡುವಂತೆ ಮನವಿ ಮಾಡಿದ್ದೇವೆ" ಎಂದು ಸಿಎಂ ಭೇಟಿ ಬಳಿಕ ವಿಜಯೇಂದ್ರ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಪ್ರತಿ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ 6,000-8,000 ಕೋಟಿ ರೂ. ನೀಡುತ್ತಿದ್ದರು ಎಂದು ಹೇಳಿದರು.

"ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿಗೆ ಅಂತಹ ಯಾವುದೇ ಹಣ ಹಂಚಿಕೆ ಮಾಡಲಾಗಿಲ್ಲ. ಆದ್ದರಿಂದ ನಾವು ಬಜೆಟ್‌ನಲ್ಲಿ ಬೆಂಗಳೂರು ನಗರಕ್ಕೆ 6,000-8,000 ಕೋಟಿ ರೂ.ಗಳನ್ನು ಕೇಳಿದ್ದೇವೆ" ಎಂದು ಅವರು ತಿಳಿಸಿದರು.

ಮೇಲ್ಸೇತುವೆಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳು ನಿಧಾನಗತಿಯಲ್ಲಿ ನಡೆಯುತ್ತಿವೆ. ಅಂತಹ ಯೋಜನೆಗಳಿಗೆ ಹೆಚ್ಚಿನ ಹಣವನ್ನು ಮಂಜೂರು ಮಾಡುವ ಮೂಲಕ ಅವುಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಬೆಂಗಳೂರಿನ ಸಂಸದರಾದ ಪಿ.ಸಿ. ಮೋಹನ್ ಮತ್ತು ತೇಜಸ್ವಿ ಸೂರ್ಯ ಅವರು, ಇತ್ತೀಚೆಗೆ ಹೆಚ್ಚಿಸಲಾದ ಮೆಟ್ರೋ ದರವನ್ನು ಕಡಿಮೆ ಮಾಡಲು ಶುಲ್ಕ ನಿಗದಿ ಸಮಿತಿಗೆ ಮತ್ತೊಮ್ಮೆ ಪತ್ರ ಬರೆಯುವಂತೆ ಮುಖ್ಯಮಂತ್ರಿಗೆ ಕೇಳಿಕೊಂಡರು ಎಂದು ಅವರು ಹೇಳಿದರು.

ನೀವು ಮೆಟ್ರೋಗೆ ಮತ್ತೊಂದು ಪತ್ರ ಬರೆಯಿರಿ. ನಾವು ಮೂರೂ ಜನ ಸಂಸದರು ಸೇರಿಕೊಂಡು ಮೂರು ದಿನಗಳಲ್ಲಿ ಮೆಟ್ರೋ ಪ್ರಯಾಣ ದರ ಇಳಿಕೆ ಮಾಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯಗೆ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಈ ಬಗ್ಗೆ ಬಿಎಂಆರ್​ಸಿಎಲ್​ ಎಂಡಿ ಜೊತೆ ಮಾತಾಡುತ್ತೇನೆ. ದರ ನಿಗದಿ ಸಮಿತಿಗೆ ಮತ್ತೊಂದು ಪತ್ರ ಬರೆಯುವ ಬಗ್ಗೆ ಹೇಳುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

Comments


bottom of page