top of page

ಬಸ್ ಹಾಗೂ ಸಿಬ್ಬಂದಿಗಳ ಮೇಲೆ ದಾಳಿ: ಕರ್ನಾಟಕ-ಮಹಾರಾಷ್ಟ್ರ ನಡುವೆ ಬಸ್ ಸಂಚಾರ ರದ್ದು

Writer: new waves technologynew waves technology

ನಿನ್ನೆಯಿಂದ ಮಹಾರಾಷ್ಟ್ರಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದ್ದೇವೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ(MSRTC) ಸಹ ಕರ್ನಾಟಕಕ್ಕೆ ಬಸ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸಿದೆ.

ಬೆಂಗಳೂರು: ಬಸ್‌ಗಳು ಮತ್ತು ಅವುಗಳ ಸಿಬ್ಬಂದಿಗಳ ಮೇಲೆ ದಾಳಿ ನಡೆದ ನಂತರ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಾರಿಗೆ ಸಂಸ್ಥೆಗಳ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

"ನಾವು ನಿನ್ನೆಯಿಂದ ಮಹಾರಾಷ್ಟ್ರಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದ್ದೇವೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ(MSRTC) ಸಹ ಕರ್ನಾಟಕಕ್ಕೆ ಬಸ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸಿದೆ" ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(NWKRTC)ದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.


ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಇಂದು ಬೆಳಗಾವಿ ಚಲೋ ಗೆ ಕರೆ ನೀಡಿದ್ದು, ಬೆಳಗಾವಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಭಾಷಾ ವಿಚಾರವಾಗಿ ಬಸ್ ನಿರ್ವಾಹಕನ ಮೇಲೆ ನಡೆದ ಈ ಹಲ್ಲೆ ಪ್ರಕರಣ ಇದೀಗ ಎರಡು ರಾಜ್ಯಗಳ ನಡುವಿನ ಸಂಪರ್ಕಕ್ಕೆ ಕುತ್ತು ಉಂಟು ಮಾಡಿದೆ.

ಬೆಳಗಾವಿಯ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಬಸ್‌ ನಿರ್ವಾಹಕ ಮಹಾದೇವ ಹುಕ್ಕೇರಿ ಮೇಲೆ ಹಲ್ಲೆ ನಡೆಸಲಾಗಿತ್ತು. ಮರಾಠಿ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕಾಗಿ ಪುಂಡರು ಹಲ್ಲೆ ನಡೆಸಿದ್ದರು. ಈ ಸಂಬಂಧ ಮಾರಿಹಾಳ ಠಾಣೆ ಪೊಲೀಸರು ಈಗಾಗಲೇ ಐವರನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಬಸ್ ನಿರ್ವಾಹಕ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments


bottom of page